ಮೌರ್ಯರು
	ಮೊದಲ ಬಾರಿಗೆ ಭಾರತದಲ್ಲಿ ರಾಜಕೀಯ ಏಕತೆ ಸಾಧಿಸಿ ಸಾಮ್ರಾಜ್ಯ ಕಟ್ಟಿ ಆಳಿದ ರಾಜವಂಶ. ಈ ವಂಶದ ಮೂಲಪುರುಷ ಚಂದ್ರಗುಪ್ತ ಮೌರ್ಯ. ಕ್ರಿ. ಪೂ. 325ರ ಸುಮಾರಿಗೆ ವಾಯುವ್ಯ ಭಾರತದಲ್ಲಿ ತಲೆದೋರಿದ ವಿಪ್ಲವಕ್ಕೆ ನಾಯಕನಾಗಿದ್ದ. ಜಸ್ಟಿನ್ ಉಲ್ಲೇಖಿಸುವ ಸಂದ್ರಕೊಟ್ಟಸ್ ಈತನೇ. ಮಗಧದಲ್ಲಿ ನಂದರ ಆಡಳಿತವನ್ನೂ ಕಿತ್ತೊಗೆಯಲು ಗ್ರೀಕ್ ಸಾಮ್ರಾಟ ಅಲೆಗ್ಸಾಂಡರನ ಸಹಾಯ ಸಹಕಾರ ಪಡೆಯುವ ಈತನ ಪ್ರಯತ್ನ ಸಫಲವಾಗಲಿಲ್ಲ. ಅದರೆ ಕಾರಣಾಂತರಗಳಿಂದ ನಂದರ ಮೇಲೆ ಕುಪಿತನಾಗಿ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲು ಸಂಕಲ್ಪ ಮಾಡಿದ ತಕ್ಷಶಿಲೆಯ ವಿಷ್ಣುಶರ್ಮ ಅಥವಾ ಕೌಟಿಲ್ಯ (ನೋಡಿ- ಕೌಟಿಲ್ಯ) ಚಂದ್ರಗುಪ್ತನಿಗೆ ನೆರವಾದ. ಕ್ರಿ.ಪೂ. 322ರಲ್ಲಿ ಚಂದ್ರಗುಪ್ತ ಮಗಧ ಸಿಂಹಾಸನವೆರಿದ, ಕೌಟಿಲ್ಯ ಅತನ ಪ್ರಧಾನಿಯಾದ. ಪರ್ವತನೆಂಬ ಅರಸ ಇವರಿಗೆ ಸೇನಾಸಹಾಯ ನೀಡಿದನೆಂದು ವಿಶಾಖದತ್ತ ಮುದ್ರಾರಾಕ್ಷಸ ತಿಳಿಸುತ್ತದೆ. 

		ಚಂದ್ರಗುಪ್ತನ ತಂದೆ ತಾಯಿಗಳ ಬಗ್ಗೆ, ಆತನ ಬಾಲ್ಯ ಜೀವನದ ಬಗೆಗಿನ ವಿವರಗಳು ತಿಳಿದುಬಂದಿಲ್ಲ. ಈತನ ತಾಯಿ ಮುರಾ ಎಂಬಾಕೆಯೆಂದೂ ಆಕೆಯಿಂದಾಗಿ ಮೌರ್ಯ ಎಂಬ ಹೆಸರು ಬಂದಿತೆಂದೂ ಹೇಳಲಾಗಿದೆ. ಭಾರತವನ್ನು ಮ್ಯಾಸಿಡೋನಿಯರಿಂದ ಮುಕ್ತಗೊಳಿಸಿದುದು ಈತನ ಸಾಧನೆ. ಕ್ರಿ.ಪೂ. 305ರಲ್ಲಿ ಸೆಲ್ಯೂಕಸ್‍ನ ಅಕ್ರಮಣಗಳನ್ನು ಹಿಮ್ಮೆಟ್ಟಿಸಿದ. ಮೈತ್ರಿ ಬಯಸಿದ ಸೆಲ್ಯೂಕಸ್, ತನ್ನ ಮಗಳನ್ನಿತ್ತು ರಕ್ತಸಂಬಂಧ ಬೆಳೆಸಿ ಈತನ ಆಸ್ಥಾನದಲ್ಲಿ ಮೆಗಾಸ್ತನೀಸ್ ಎಂಬ ರಾಯಭಾರಿಯನ್ನು ಇರಿಸಿದ. ಕ್ರಿ. ಪೂ. 298ರ ತನಕ ಚಂದ್ರಗುಪ್ತ ಪಾಟಲಿಪುತ್ರದಿಂದ ರಾಜ್ಯವಾಳಿದ. ತನ್ನ ಕೊನೆಗಾಲದಲ್ಲಿ ಗುರುಭದ್ರಬಾಹುವಿನೊಂದಿಗೆ ಕರ್ನಾಟಕದ ಶ್ರವಣಬೆಳಗೊಳಕ್ಕೆ ಬಂದು, ಸಲ್ಲೇಖನ ವ್ರತ ಕೈಗೊಂಡು, ಮರಣಿಸಿದನೆಂಬ ಪ್ರತೀತಿ ಇದೆ. 					(ನೋಡಿ- ಚಂದ್ರಗುಪ್ತ-ಮೌರ್ಯ) 

		ಕ್ರಿ. ಪೂ. 298 ರಿಂದ 273ರ ತನಕ ರಾಜ್ಯವಾಳಿದ ಬಿಂದುಸಾರ ಚಂದ್ರಗುಪ್ತನ ಮಗ ಹಾಗೂ ಉತ್ತರಾಧಿಕಾರಿ. ಈತ ತಂದೆಯಿಂದ ಬಂದ ಸಾಮ್ರಾಜ್ಯವನ್ನು ಸಂರಕ್ಷಿಸಿಕೊಂಡನಲ್ಲದೆ ದಕ್ಷಿಣ ಭಾರತದ ಕೆಲವು ಪ್ರದೇಶಗಳನ್ನು ಗೆದ್ದು ವಿಸ್ತರಿಸಿದನೆಂದು ಹೇಳಲಾಗಿದೆ. ಗ್ರೀಕ್ ಚರಿತ್ರೆಕಾರರು ಈತನನ್ನು ಅಮಿತ್ರಘಾತನೆಂದೂ ಜೈನ ಕೃತಿಕಾರರು ಸಿಂಹಸೇನನೆಂದೂ ಕರೆದಿದ್ದಾರೆ. ಈತನಿಗೆ ಅನೇಕ ಮಕ್ಕಳಿದ್ದರು ಎನ್ನಲಾಗಿದೆ. ಈತನ ಸ್ಥಾನದಲ್ಲಿ ಡೆಮಾಕೋಸ್ ಎಂಬ ಗ್ರೀಕ್ ರಾಯಭಾರಿ ಇದ್ದ. ಸಿರಿಯದ ಅರಸನೊಂದಿಗೂ ಬಿಂದು ಸಾರ ಮೈತ್ರಿ ಹೊಂದಿದ್ದ. (ನೋಡಿ- ಬಿಂದುಸಾರ) 
ಕ್ರಿ. ಪೂ. 273 ರಿಂದ 232ರ ತನಕ ಆಳಿದ ಅಶೋಕ ಬಿಂದುಸಾರನ ಮಗ ಚಕ್ರವರ್ತಿಯಾಗುವ ಮೊದಲು ತಕ್ಷಶಿಲೆ ಹಾಗೂ ಉಜ್ಜಯನಿಗಳಲ್ಲಿ ರಾಜ್ಯಪಾಲನಾಗಿದ್ದ. ಕಳಿಂಗದ ಯುದ್ಧಾನಂತರ ಇವನ ಮನಃಪರಿವರ್ತನೆಯಾಗಿ ಬೌದ್ಧ ಧರ್ಮ ಸ್ವೀಕರಿಸಿದ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ. ದೇವಾನಾಂಪ್ರಿಯ ಹಾಗೂ ಪ್ರಿಯದರ್ಶಿನಿ ಎನಿಸಿದ ಇವನು ತನ್ನ ಪ್ರಜೆಗಳಿಗಾಗಿ ಧರ್ಮದ ಶ್ರೇಷ್ಠತೆ ಸಾರುವ ಶಾಸನಗಳನ್ನು ಸರಳ ಭಾಷೆಯಲ್ಲಿ ಸಾಮ್ರಾಜ್ಯದ ಹಲವೆಡೆ ಕಂಡರಿಸಿದ (ನೋಡಿ- ಅಶೋಕನ-ಶಾಸನಗಳು). ಇವನು ವಿಶ್ವದ ಇತಿಹಾಸದ ಮಹಾಪುರುಷರಲ್ಲೊಬ್ಬ. (ನೋಡಿ- ಅಶೋಕ)
ಅಶೋಕನ ತರುವಾಯ ಮೌರ್ಯ ಸಾಮ್ರಾಜ್ಯ ಬಲುಬೇಗ ಕುಸಿಯಿತು. ಅಶೋಕನ ಬೌದ್ಧ ಧರ್ಮ ಪಕ್ಷಪಾತ ಇದಕ್ಕೆ ಕಾರಣ ಎಂಬ ಆರೋಪದಲ್ಲಿ ಹುರುಳಿಲ್ಲ. ಅರಸರ ದೌರ್ಬಲ್ಯ, ಪರಸ್ಪರ ಕಲಹಗಳಿಂದಲೇ ಈ ವಂಶದ ಆಳ್ವಿಕೆ ಕೊನೆಗೊಂಡಿತು. ಅಶೋಕನ ತರುವಾಯದ ಇತಿಹಾಸ ಖಚಿತವಾಗಿ ತಿಳಿದುಬರುವುದಿಲ್ಲ. ಕುಣಾಲ, ಬಂಧುಪಾಲಿತ, ಇಂದ್ರಪಾಲಿತ, ದಶರಥ, ಸಂಪ್ರತಿ, ದೇವವರ್ಮ ಮುಂತಾದವರನ್ನು ಪುರಾಣಗಳು ಉಲ್ಲೇಖಿಸುತ್ತವೆ. ದಶರಥನೆಂಬ ಹೆಸರಿನ ಅಶೋಕ ಪೌತ್ರನು ಶಾಸನಗಳಲ್ಲಿ ಕಂಡುಬರುತ್ತಾನೆ. ಸಂಪ್ರತಿ ಆತನ ಇನ್ನೊಬ್ಬ ಮೊಮ್ಮಗ. ಜಲೌಕನೆಂಬ ಮತ್ತೊಬ್ಬ ಮೊಮ್ಮಗನನ್ನು ರಾಜತರಂಗಿಣಿ ಉಲ್ಲೇಖಿಸುತ್ತದೆ. ಕ್ರಿ. ಪೂ. 185ರಲ್ಲಿ ಬೃಹದ್ರಥ ಎಂಬ ಮೌರ್ಯ ಅರಸನನ್ನು ಆತನ ಸೇನಾನಿ ಪುಷ್ಯಮಿತ್ರ ಕೊಂದು, ಸಿಂಹಾಸನವೇರಿ ಶುಂಗವಂಶದ ಆಳ್ವಿಕೆ ಆರಂಭಿಸಿದ.

	ಆಡಳಿತ : ಮೌರ್ಯಕಾಲೀನ ಆಡಳಿತವನ್ನು ತಿಳಿಯಲು ಮೆಗಾಸ್ತನೀಸನ ವೃತ್ತಾಂತ ಹಾಗೂ ಕೌಟಿಲ್ಯನ ಅರ್ಥಶಾಸ್ತ್ರ ಮನಗೆ ಲಭ್ಯವಿರುವ ಪ್ರಧಾನ ಆಕರಗಳು. ಮೊದಲನೆಯದು ಉಪಲಬ್ಧವಿಲ್ಲ. ಆದರೆ ಗ್ರೀಕ್ ಚರಿತ್ರಕಾರರ ಕೃತಿಗಳಲ್ಲಿನ ಉಲ್ಲೇಖಗಳಿಂದ ಭಾಗಶಃ ತಿಳಿಯಲು ಸಾಧ್ಯ.

	ಮೌರ್ಯ ಸಾಮ್ರಾಜ್ಯ ವಿಶಾಲವಾಗಿದ್ದು ಹಲವು ಪ್ರಾಂತ್ಯಗಳಿಂದ ಕೂಡಿತ್ತು. ಪ್ರಾಂತ್ಯಗಳ ಆಡಳಿತವನ್ನು ಅಧಿಕಾರಿಗಳು ನಿರ್ವಹಿಸುತ್ತಿದ್ದರು. ಗ್ರಾಮಸಭೆಗಳಿಂದ ಗ್ರಾಮದ ಆಡಳಿತ ನಡೆಯುತ್ತಿತ್ತು. ರಾಜನಿಗೆ ಆಡಳಿತದಲ್ಲಿ ಮಂತ್ರಿ ಪರಿಷತ್ತು ನೆರವು ನೀಡುತ್ತಿತ್ತು. ದೇಶದಲ್ಲಿನ ವಿದ್ಯಮಾನಗಳನ್ನು ವರದಿ ಮಾಡಲು ಗೂಢಚಾರರಿದ್ದರು. ಅಧಿಕಾರ ಬಹುಮಟ್ಟಿಗೆ ವಿಕೇಂದ್ರೀಕೃತವಾಗಿತ್ತು.

	ಮೆಗಾಸ್ತನೀಸನಿಂದ ಪಾಟಲೀಪುತ್ರದ ಪೌರಾಡಳಿತಕ್ರಮದ ಪರಿಚಯ ಲಭ್ಯವಾಗಿದೆ. ನಗರ ಪಾಲಕ ಪೌರಾಡಳಿತದ ಪ್ರಧಾನಾಧಿಕಾರಿ; ಈತನ ನೇತೃತ್ವದಲ್ಲಿದ್ದ ಐವರು ಸದಸ್ಯರ ಆರು ಸಮಿತಿಗಳು ನಗರದ ಔದ್ಯೋಗಿಕ ಕಾರ್ಯ, ವಿದೇಶಿಯರ ಮೇಲ್ವಿಚಾರಣೆ, ಜನನ ಮರಣಗಳ ದಾಖಲಾತಿ, ವ್ಯಾಪಾರ ತೂಕ ಮತ್ತು ಅಳತೆಯ ಪರಿಶೀಲನೆ, ಕೈಗಾರಿಕಾ ವಸ್ತುಗಳ ತಯಾರಿಕೆ ಹಾಗೂ ಮಾರಟ ಮತ್ತು ಮಾರಾಟವಾದ ವಸ್ತುಗಳ ಬೆಲೆಯ ದಶಾಂಶ ಅಥವಾ ಷಡ್ಭಾಗ ಸುಂಕ ವಸೂಲಿ - ಈ ಕಾರ್ಯಗಳನ್ನು ನಿರ್ವಹಿಸುತ್ತಿದ್ದವು. ಮಾರುಕಟ್ಟೆ, ಬಂದರು ದೇವಾಲಯ ಮತ್ತಿತರ ಲೋಕೋಪಯೊಗಿ ಕೆಲಸಗಳೂ ಪೌರಾಡಳಿತದ ವ್ಯಾಪ್ತಿಗೆ ಸೇರಿದ್ದವು.

	ಸೈನ್ಯ ಪದಾತಿ, ಅಶ್ವ, ಗಜ ಹಾಗೂ ರಥ ದಳಗಳಿಂದ ಕೂಡಿತ್ತು. ಪ್ರತಿಯೊಂದು ದಳದ ಕಾರ್ಯನಿರ್ವಹಣೆಗೆ ಪ್ರತ್ಯೇಕ ಮಂಡಲಿ ಇತ್ತು. ಅರಸನೇ ಪ್ರಧಾನ ಸೇನಾಧಿಕಾರಿ. ಸೇನಾಡಳಿತಕ್ಕೆ ಸಂಬಂಧಿಸಿದಂತೆ ಮೂವತ್ತು ಜನರ ಪ್ರತ್ಯೇಕ ಕಚೇರಿ ಇತ್ತು. ಚಂದ್ರಗುಪ್ತನ ಸೈನ್ಯದಲ್ಲಿ ಆರು ಲಕ್ಷ ಸೈನಿಕರು, ಮೂವತ್ತು ಸಾವಿರ ಕುದುರೆ, ಒಂಬತ್ತು ಸಾವಿರ ಆನೆ ಹಾಗೂ ಎಂಟು ಸಾವಿರ ರಥಗಳಿದ್ದುವೆಂದು ತಿಳಿದುಬಂದಿದೆ.

	ರಾಜ್ಯದ ಆದಾಯದ ಪ್ರಮುಖ ಮೂಲ ಭೂ ಕಂದಾಯ. ಉದ್ಯೋಗ, ಗಣಿ ಅರಣ್ಯ ಮುಂತಾದವುಗಳಿಂದ ಬಂದ ಆದಾಯ, ಸಾಮಂತ ಅರಸರು ನೀಡಿದ ಕಪ್ಪಕಾಣಿಕೆಗಳೂ ರಾಜಭಂಡಾರಕ್ಕೆ ಸೇರುತ್ತಿದ್ದವು. ಇವುಗಳ ಉಸ್ತುವಾರಿಗೆ ಸಮೂಹರ್ತ ಎಂಬ ಅಧಿಕಾರಿ ಇದ್ದ. ಕೌಟಿಲ್ಯನ ಕೃತಿ ಹಲವು ತೆರನ ಅಧಿಕಾರಿಗಳನ್ನು, ಅವರು ನಿರ್ವಹಿಸಬೇಕಾದ ಕರ್ತವ್ಯಗಳನ್ನು ವಿವರಿಸುತ್ತದೆ.

	ವ್ಯವಸಾಯವೆ ಜನರ ಪ್ರಧಾನ ಕಸಬಾಗಿತ್ತು. ಕುಶಲಕಲೆ ಮತ್ತಿತರ ಉದ್ಯೋಗಗಳಲ್ಲಿಯೂ ಪರಿಶ್ರಮ ಹೊಂದಿದ್ದರು. ಜನ ಪ್ರಾಮಾಣಿಕರಾಗಿದ್ದು ಕಳ್ಳತನ ದರೋಡೆಗಳು ಅತ್ಯಪರೂಪವಾಗಿದ್ದವು. ಜನತೆಯ ಸಂರಕ್ಷಣೆಗಾಗಿ ರಕ್ಷಕ ಪಡೆಯೂ ಇತ್ತು. ದಂಡನೀತಿ ಕಠಿಣವಾಗಿತ್ತುಇ. ಜನ ಸಾನಮಾನ್ಯರು ಸುಖ ನೆಮ್ಮದಿಯಿಂದ ಜೀವಿಸುತ್ತಿದ್ದರೆಂದು ಗ್ರೀಕ್ ಚರಿತ್ರಕಾರ ವಿವರಣೆಗಳಿಂದ ತಿಳಿದುಬರುತ್ತದೆ. ಅಶೋಕ ತನ್ನ ಪ್ರಜೆಗಳನ್ನು ಮಕ್ಕಳಂತೆ ಪ್ರೀತಿವಾತ್ಸಲ್ಯಗಳಿಂದ ಸಲಹಿದ; ಜನಸಾಮಾನ್ಯರ ಆಡುನುಡಿಗೆ ಪ್ರಾಶಸ್ತ್ಯ ನೀಡಿದ.

	ವಾಸ್ತುಶಿಲ್ಪ : ಚಂದ್ರಗುಪ್ತನ ಅರಮನೆಯ ವೈಭವವನ್ನು ಕಂಡ ಮೆಗಾಸ್ತನೀಸ್ ಅದನ್ನು ವರ್ಣಿಸಿದ್ದಾನೆ. ಅಶೋಕನ ಅರಮನೆಯ ಭವ್ಯತೆಯನ್ನು ಚೀನೀ ಯಾತ್ರಿಕ ಫಾ - ಹಿಯಾನ್ ಕೊಂಡಾಡಿದ್ದಾನೆ. ಆದರೆ ಮರಮುಟ್ಟುಗಳಿಂದ ನಿರ್ಮಿತವಾದ ಮೌರ್ಯರಚನೆಗಳು ಬಲು ಕಾಲ ಉಳಿದುಬರಲಿಲ್ಲ.

	ಅಶೋಕನ ಕಾಲದಲ್ಲಿ ವಾಸ್ತುಶಿಲ್ಪದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು. ಈತ ವಾಸ್ತುಶಿಲ್ಪ ನಿರ್ಮಾಣಕ್ಕೆ ಕಲ್ಲಿನ ಮಾಧ್ಯಮವನ್ನು ಆರಿಸಿಕೊಂಡಿದ್ದು ಕ್ರಾಂತಿಕಾರಕ ಹೆಜ್ಜೆ. ಹೀಗೆ ಆರಿಸಿಕೊಳ್ಳಲು ಪರ್ಷಿಯನ್ ಪ್ರಭಾವವೇ ಕಾರಣವೆಂದು ಹೇಳಲಾಗಿದೆ.

	ಅಶೋಕ ಅನೇಕ ಗುಹಾಲಯಗಳನ್ನು ಕಟ್ಟಿಸಿದನೆಂದು ಬೌದ್ಧ ಗ್ರಂಥಗಳಿಂದ ತಿಳಿದುಬರುತ್ತದೆ. ಆದರೆ ಲಭ್ಯವಾಗಿರುವುದು ಬಾರಾಬರ್ ಬೆಟ್ಟದ ಮೂರು ಗುಹಾರಚನೆಗಳು ಮಾತ್ರವೇ. ಒಂದೇ ಬಂಡೆಯಲ್ಲಿ ಕೊರೆಯಲಾದ ಇವು ಸರಳ ಸುಂದರ ರಚನೆಗಳು. ಸಾಂಚಿ, ಸಾರನಾಥಗಳಲ್ಲಿ ಅಶೋಕ ಸ್ತೂಪಗಳನ್ನು ಕಟ್ಟಿಸಿದ, ಸಾಂಚಿ ಸ್ತೂಪ ಮೂಲತಃ ದೊಡ್ಡ ಪ್ರಮಾಣದ ಇಟ್ಟಿಗೆಯ ಕಟ್ಟಡ. ಮೌರ್ಯಕಾಲದ ಪ್ರಧಾನ ವಾಸ್ತುಕೃತಿಗಳೆಂದರೆ ಅಶೋಕಸ್ತಂಭಗಳು. ಸುಮಾರು ಮೂವತ್ತು ಸ್ತಂಭಗಳು ದೊರೆತಿದ್ದು, ಒಂದೊಂದು 40 ರಿಂದ 50 ಟನ್ ತೂಗುತ್ತವೆ. ಇವುಗಳ ನಯನುಣುಪು ನಿಬ್ಬೆರಗುಗೊಳಿಸುತ್ತದೆ. ರಾಮಪೂರ್ವ, ಸಾರನಾಥ, ಸಾಂಚಿ, ಸಂಕಿಸ್ಸ ಮುಂತಾದೆಡೆ ಇವು ಕಾಣಸಿಗುತ್ತದೆ. ಇವುಗಳ ಮೇಲಿನ ಪ್ರಾಣಿಶಿಲ್ಪ ಹಾಗೂ ಲತಾವಿನ್ಯಾಸ ನಯನಮನೋಹರವಾಗಿದೆ. ಅಶೋಕನ ಸಾರನಾಥ ಸ್ತಂಭಶಿಲ್ಪ ಸ್ವತಂತ್ರ ಭಾರತದ ರಾಷ್ಟ್ರಚಿಹ್ನೆಯಾಗಿದೆ 

(ನೋಡಿ- ಅಶೋಕ-ಚಕ್ರ). ಧೌಲಿಯ ಆನೆಯ ಉಬ್ಬುಶಿಲ್ಪ ಗಮನಾರ್ಹವಾದ್ದು .
(ನೋಡಿ- ಭಾರತದ-ಇತಿಹಾಸ)
(ನೋಡಿ- ಭಾರತೀಯ-ಮೂರ್ತಿಶಿಲ್ಪ)
(ನೋಡಿ- ಭಾರತೀಯ-ವಾಸ್ತುಶಿಲ್ಪ)
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ